. Adelaide SA, Australia
ಅಶ್ವಿನ್, ಯಾದವ್ ಬೌಲಿಂಗ್ ದಾಳಿಗೆ ಆಸೀಸ್ ತತ್ತರ: ಭಾರತಕ್ಕೆ 62 ರನ್ ಗಳ ಮುನ್ನಡೆ
ವಿಕೆಟ್ ಪಡೆದ ಸಂಭ್ರಮದಲ್ಲಿ ಟೀಂ ಇಂಡಿಯಾದ ಆಟಗಾರರು (Photo Credit: PTI)
- ಆರ್.ಅಶ್ವಿನ್, ಉಮೇಶ್ ಯಾದವ್ ಮಾರಕ ಬೌಲಿಂಗ್ ದಾಳಿಗೆ ಕುಸಿದ ಆಸೀಸ್
- ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿ ಬೌಲಿಂಗ್ ನಲ್ಲಿ ಮೇಲುಗೈ ಸಾಧಿಸಿದ ಭಾರತ
- 191 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಹಿನ್ನೆಡೆ ಅನುಭವಿಸಿದ ಆಸ್ಟ್ರೇಲಿಯಾ
ಅಡಿಲೇಡ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಮಾರಕ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯ ತತ್ತರಿಸಿ ಹೋಗಿದೆ. ರವಿಚಂದ್ರನ್ ಅಶ್ವಿನ್ ಮತ್ತು ಉಮೇಶ್ ಯಾದವ್ ಬೌಲಿಂಗ್ ದಾಳಿಗೆ ನಲುಗಿದ ಆಸೀಸ್ ಅಲ್ಪಮೊತ್ತಕ್ಕೆ ಆಲ್ಔಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್ ನಲ್ಲಿ 57 ರನ್ ಗಳ ಹಿನ್ನಡೆ ಅನುಭವಿಸಿದೆ. ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿದ್ದರೂ ಕೂಡ ಬೌಲಿಂಗ್ ನಲ್ಲಿ ಮೇಲುಗೈ ಸಾಧಿಸುವಲ್ಲಿ ಭಾರತ ಯಶಸ್ವಿಯಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದಿದ್ದ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಗೆ 233 ರನ್ ಗಳಿಸಿತ್ತು. ಶುಕ್ರವಾರ ಬ್ಯಾಟಿಂಗ್ ಮುಂದುವರಿಸಿದ ಭಾರತ 93.1 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ 244 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಇದನ್ನೂ ಓದಿ: 4 ವಿಕೆಟ್ ಪಡೆದ ಮಿಚೆಲ್ ಸ್ಟಾರ್ಕ್:ಮೊದಲ ಇನ್ನಿಂಗ್ಸ್ನಲ್ಲಿ 244ಕ್ಕೆ ಆಲೌಟಾದ ಟೀಂ ಇಂಡಿಯ
ಭಾರತದ ಪರ ಮೊದಲ ದಿನ ಬ್ಯಾಟಿಂಗ್ ಪ್ರಾರಂಭಿಸಿದ ಪೃಥ್ವಿ ಶಾ ಡಕೌಟ್ ಆದರೆ, ಮಯಾಂಕ್ ಅಗರ್ವಾಲ್ 17 ರನ್ಗೆ ಪೇವಿಲಿಯನ್ ಸೇರಿದ್ದರು. ನಂತರ ಬಂದ ಚೇತೇಶ್ವರ್ ಪೂಜಾರ(43) ಹಾಗೂ ನಾಯಕ ವಿರಾಟ್ ಕೊಹ್ಲಿ(74) ತಂಡಕ್ಕೆ ಚೇತರಿಕೆ ನೀಡಿದ್ದರು. ನಾಯಕನ ಆಟವಾಡಿದ ಕೊಹ್ಲಿ ಆಕರ್ಷಕ ಅರ್ಧಶತಕ ಗಳಿಸುವ ಮೂಲಕ ಮಿಂಚಿದರು. 160 ಎಸೆತಗಳಲ್ಲಿ 43 ರನ್ ಗಳಿಸಿದ ಪೂಜಾರ ರಾಹುಲ್ ದ್ರಾವಿಡ್ ಆಟವನ್ನು ನೆನಪಿಸಿದರು.
ಅಜಿಂಕ್ಯಾ ರಹಾನೆ(42) ಕೂಡ ಉತ್ತಮ ಪ್ರದರ್ಶನ ನೀಡಿದರು. ಹನುಮ ವಿಹಾರಿ(16) ಗಳಿಸಿ ಔಟಾದರು. 2ನೇ ದಿನ ಬ್ಯಾಟಿಂಗ್ ಮುಂದುವರೆಸಿದ ವೃದ್ಧಿಮಾನ್ ಸಹಾ(9), ಆರ್.ಅಶ್ವಿನ್(15), ಉಮೇಶ್ ಯಾದವ್(6) ಹಾಗೂ ಜಸ್ಪ್ರೀತ್ ಬುಮ್ರಾ 4 ರನ್ ಗಳಿಸಿ ಔಟಾಗದೆ ಉಳಿದರು. ಅಂತಿಮವಾಗಿ 93.1 ಓವರ್ ಗಳಲ್ಲಿ ಭಾರತ 244 ರನ್ಗಳಿಗೆ ಆಲ್ಔಟ್ ಆಯಿತು. ಆಸ್ಟ್ರೇಲಿಯಾ ಪರ ಬೌಲಿಂಗ್ ನಲ್ಲಿ ಮಿಚೆಲ್ ಸ್ಟಾರ್ಕ್ 4 ವಿಕೆಟ್ ಕಬಳಿಸಿ ಮಿಂಚಿದರೆ, ಪ್ಯಾಟ್ ಕಮಿನ್ಸ್ 3, ಜೋಶ್ ಹ್ಯಾಜಲ್ ವುಡ್ ಹಾಗೂ ನಾಥನ್ ಲಿಯಾನ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
ಈ ಸುದ್ದಿ ಓದಿ: ಪಿಂಕ್ ಬಾಲ್ ಟೆಸ್ಟ್ನಲ್ಲಿ ಭಾರತದ ರಕ್ಷಣಾತ್ಮಕ ಆಟ: ದ್ರಾವಿಡ್ ನೆನಪು ತಂದ ಪೂಜಾರಾ..!
ಉತ್ಸಾಹದಲ್ಲಿಯೇ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾಗೆ ಜಸ್ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ಮ್ಯಾಥ್ಯೂ ವೇಡ್(8) ಹಾಗೂ ಜೋ ಬರ್ನ್ಸ್(8) ಬಹುಬೇಗನೇ ವಿಕೆಟ್ ಒಪ್ಪಿಸಿದರು. ಮಾರ್ನಸ್ ಲಬುಶೇನ್(47) ಕೆಲ ಕಾಲ ಕ್ರೀಸ್ ನಲ್ಲಿ ನಿಂತು ಉತ್ತಮವಾಗಿ ಆಡಿದರು. ಸ್ಟೀವ್ ಸ್ಮಿತ್ ಕೇವಲ 1 ರನ್ ಗಳಿಸಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಈ ಸುದ್ದಿ ಓದಿ: ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದ ರೋಹಿತ್ ಶರ್ಮಾ: ಡಿ. 14 ರಂದು ಆಸ್ಟ್ರೇಲಿಯಕ್ಕೆ ಪ್ರಯಾಣ
ಇನ್ನುಳಿದಂತೆ ಟ್ರಾವಿಸ್ ಹೆಡ್(7), ಕ್ಯಾಮೆರಾನ್ ಗ್ರೀನ್(11), ಪ್ಯಾಟ್ ಕಮ್ಮಿನ್ಸ್(0), ಮಿಚೆಲ್ ಸ್ಟಾರ್ಕ್(15) ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೆ ವಿಕೆಟ್ ಒಪ್ಪಿಸಿದರು. ನಾಯಕ ಟಿಮ್ ಪೇನ್ ಏಕಾಂಗಿ ಹೋರಾಟ ನಡೆಸಿ ಆಕರ್ಷಕ ಅರ್ಧಶತಕ ಭಾರಿಸಿದರು. 73 ರನ್ ಗಳಿಸಿದ ಔಟಾಗದೆ ಉಳಿದ ಅವರು ತಂಡವನ್ನು ಅಪಾಯಯಿಂದ ಪಾರು ಮಾಡಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.
ಈ ಸುದ್ದಿ ಓದಿ: ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ: ರೋಹಿತ್ ಆಸ್ಟ್ರೇಲಿಯಗೆ ಇನ್ನೂ ಯಾಕೆ ಹೋಗಿಲ್ಲ ಗೊತ್ತಾ?
ಅಂತಿಮವಾಗಿ ಆಸ್ಟ್ರೇಲಿಯಾ 72.1 ಓವರ್ ಗಳಲ್ಲಿ 191 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ 57 ರನ್ ಗಳ ಹಿನ್ನಡೆ ಅನುಭಿಸಿತು. ಭಾರತದ ಪರ ಬೌಲಿಂಗ್ ನಲ್ಲಿ ಆರ್.ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರೆ, ಉಮೇಶ್ ಯಾದವ್ 3, ಜಸ್ಪ್ರೀತ್ ಬುಮ್ರಾ 2 ವಿಕೆಟ್ ಕಬಳಿಸಿದರು.
ಮತ್ತೆ ನಿರಾಸೆ ಮೂಡಿಸಿದ ಪೃಥ್ವಿ ಶಾ
ಟೀಂ ಇಂಡಿಯಾ 2ನೇ ಇನ್ನಿಂಗ್ಸ್ ಪ್ರಾರಂಭಿಸಿದ್ದು, 1 ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಆಟಗಾರ ಪೃಥ್ವಿ ಶಾ ಕೇವಲ 4 ರನ್ ಗಳಿಸಿ ಪ್ಯಾಟ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಭಾರತ 6 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 9 ರನ್ ಗಳಿಸಿದೆ. ಮಯಾಂಕ್ ಅಗರ್ವಾಲ್(5) ಹಾಗೂ ಜಸ್ಪ್ರೀತ್ ಬುಮ್ರಾ(0) ಕ್ರೀಸ್ ನಲ್ಲಿದ್ದಾರೆ.